ರ್ಹೀಸಸ್ ಮಂಗ
ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗ. ದ್ವಿನಾಮ ಪದ್ಧತಿ ಹೆಸರು: ಮಕಾಕ ಮುಲೇಟ. ದಕ್ಷಿಣ ಮತ್ತು ಆಗ್ನೇಯ ಏಷ್ಯವಾಸಿ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ. 

ಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣ; 47-64 ಸೆಮೀ ಉದ್ದದ ಬಲಿಷ್ಠ ದೇಹ; 20-30 ಸೆಂಮೀ ಉದ್ದದ ಬಾಲ; 4.5-11 ಕಿಗ್ರಾಮ್ ತೂಕ; ಕಿತ್ತಳೆ-ಕೆಂಪು ಬಣ್ಣದ ಕೂದಲು ಇರುವ ಪೃಷ್ಠ ಹಾಗೂ ಒಳತೊಡೆ; ಹಣೆಯಿಂದ ಹಿಮ್ಮುಖವಾಗಿ ಬೆಳೆದಿರುವ ಬೈತಲೆರಹಿತ ತಲೆಗೂದಲು - ಇವು ವಯಸ್ಕ ರ್ಹೀಸಸ್ ಮಂಗದ ವಿಶಿಷ್ಟ ಲಕ್ಷಣಗಳು. 
ಬಲಿಷ್ಠ ಗಂಡು ಮಂಗದ ನಾಯಕತ್ವದಲ್ಲಿ 8-180 ಸದಸ್ಯರಿರುವ ಗುಂಪುಗಳಲ್ಲಿ ವಾಸ. ಅಲೆಮಾರೀ ಪ್ರವೃತ್ತಿ. ಅಕ್ಟೋಬರ್-ಡಿಸೆಂಬರ್ ಗಂಡುಹೆಣ್ಣುಗಳು ಕೂಡುವ ಕಾಲ. ಆಹಾರ: ಹಣ್ಣು, ಬೀಜ, ಬೇರು, ಮೂಲಿಕೆ ಮತ್ತು ಚಿಕ್ಕ ಕೀಟಗಳು. 

ಹಿಂದು ಮತ್ತು ಬೌದ್ಧರಿಗೆ ಇದು ಪವಿತ್ರ ಪ್ರಾಣಿ. ಎಂದೇ, ಭಾರತದಲ್ಲಿ ಮಾನವ ಆವಾಸ ಮತ್ತು ದೇವಾಲಯಗಳ ಆಸುಪಾಸಿನಲ್ಲಿ ಇವು ನೆಲಸಿವೆ. 
ದೈಹಿಕ ಪ್ರಕ್ರಿಯೆಗಳಲ್ಲಿ ಮಾನವನನ್ನು ಹೋಲುವುದರಿಂದ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಪ್ರಯೋಗಪಶು ವಾಗಿ ವ್ಯಾಪಕ ಬಳಕೆ. ಮಾನವನ ಕೆಂಪು ರಕ್ತಕಣಗಳ ಮೇಲೈಯಲ್ಲಿರುವ ರ್ಹೀಸಸ್ ಅಂಶ ಎಂಬ ಪ್ರತಿಜನಕಗಳು (ಆಂಟಿಜೆನ್) ರ್ಹೀಸಸ್ ಮಂಗಗಳ ರಕ್ತದಲ್ಲಿ ಮೊದಲು ಪತ್ತೆಯಾಯಿತು.	
(ಬಿ.ಎಚ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ